The Roots- A short film by Nagathihalli Ramesh

ಬುದ್ಧ ಪ್ರಜ್ಞೆಯ ಕೆ.ಎಚ್.ರಂಗನಾಥ್

                          ಇಂದು ಜನಸಾಮಾನ್ಯರಲ್ಲಿ ರಾಜಕೀಯ ಬಗ್ಗೆ ನಿರಾಸಕ್ತಿ ಮೂಡುತ್ತಿದೆ. ನೂರಾರು ಕನಸು ಬಯಕೆಗಳನ್ನು ಹೊತ್ತು ಕಾಲಗಳನ್ನು ಪಕ್ಷಗಳನ್ನು ಕಾದ ಪ್ರಜೆ ಭ್ರಮನಿರಸನ ಹೊಂದಿದ್ದಾನೆ. ತಾನು ದುಡಿವ ತೊಳಿಗಿಷ್ಟು ವಿಶ್ರಾಂತಿ ದೊರೆತಿತೆ? ನನ್ನ ಶ್ರಮಕ್ಕಿಷ್ಟು ಪ್ರತಿಫಲ ದೊರೆತಿತೆ? ಎಂದು ಕಣ್ಣರಳಿಸಿದ ಸಮುದಾಯ ಒಂದು ಬಗೆಯ ಯಾತನೆಗೊಳಗಾಗಿದೆ. ಸಾವನ್ನು ಎದುರು ನೋಡುವ ರೋಗಿಯಂತೆ ಜನ ತಟಸ್ಥರಾಗುತ್ತಿದ್ದಾರೆ. ತಮಗಾಗುತ್ತಿರುವ ಅನಾನುಕೂಲತೆಗಳಾಗಲಿ, ಶೋಷಣೆಗಳಾಗಲಿ ಅವರಲ್ಲಿ ಹೋರಾಟ ಮಾಡುವ ಮನಸ್ಸನ್ನು ಎಚ್ಚರಗೊಳಿಸದಾಗಿದೆ. ಎಲ್ಲ ಅನ್ಯಾಯವೂ ಸ್ವಾಭಾವಿಕವಿಸುವ ವಾತಾವರಣದ ಹೆರಿಗೆಯಾಗಿದೆ. ಡಾ.ಜಾನ್ಸನ್ ಎಂಬ ವಿದ್ವಾಂಸನು ರಾಜಕೀಯವೆಂಬುದು ಫಟಿಂಗನ ಕೊನೆಯ ಆಸರೆ ಎಂದು ಹೇಳಿರುವುದು ಸರಿ ಎಂಬಂಥ ಭಾವನೆ ಅನೇಕರಲ್ಲಿ ಭಾಗಿಯಾಗಿದೆ. ಇದಕ್ಕೆ ನಮ್ಮ ರಾಜಕೀಯ ನಾಯಕರು ಮೂಲ ಹೊಣೆಯಾಗಿದ್ದಾರೆ. ಅಧಿಕಾರಕ್ಕೆ ಬರಲು ಅವರು ನಡೆಸುವ ಪ್ರಜಾಪ್ರಭುತ್ವ, ವಿರೋಧಿ ಗುಣಗಳು ಅಧಿಕಾರದ ನಂತರವೂ ಜೀವಂತಿಕೆ  ಪಡೆಯುತ್ತಿವೆ. ಅಜ್ಞಾನ, ಸ್ವಜನ ಪಕ್ಷಪಾತ, ಕುಟುಂಬ ಪ್ರೇಮ, ಪುತ್ರವ್ಯಾಮೋಹ, ಭ್ರಷ್ಟತನ ಇತ್ಯಾದಿ ಆಘಾತಕಾರಿ ಅಂಶಗಳನ್ನು ತಮ್ಮ ಘನತೆಗಳಾಗಿ ಮಾಡಿಕೊಳ್ಳುವ ರಾಜಕಾರಣಿಗಳೇ ಹೆಚ್ಚು ದುಡ್ಡು, ಭೂಮಿ ಬಾಚಲು ಹಗಲು ದರೋಡೆಗಿಳಿದಿರುವರು ಸಾಲು ಸಾಲಾಗಿ ಕಂಬಿ ಎಣಿಸುತ್ತಿದ್ದಾರೆ. ಈ ಕಾರಣದಿಂದ ಸಾಮಾನ್ಯ ಜನರಿಗೆ ರಾಜಕೀಯ ರಾಜಕಾರಣಿ ಎಂಬುವ ಬೇಸರ ಅಸಹ್ಯಗಳುಂಟಾಗುವಂತೆ ಮಾಡಿದೆ. ಇಂಥ ವ್ಯವಸ್ಥೆಯಲ್ಲಿ ರಾಜಕೀಯವನ್ನು ಎದೆಯಾಳದಿ ಪಾಲಿಸುವ ಹಾಗೂ ಸಮಾಜವನ್ನು ವಿಕಾಸದೆಡೆ ಕೊಂಡೊಯ್ಯುವ ರಾಜಕಾರಣಿಗಳು ವಿರಳ ಅಂಥ ರಾಜಕಾರಣಿಗಳಲ್ಲಿ ಸಂತಮನಸ್ಸಿನ ಪ್ರಬುದ್ಧ ಚಿಂತಕ ಬುದ್ಧ ಪ್ರಜ್ಞೆಯ ಕೆ.ಎಚ್.ರಂಗನಾಥ್ ಅವರು ಗಮನಾರ್ಹರಾಗಿದ್ದಾರೆ.

    ಕೆ.ಎಚ್.ರಂಗನಾಥ್ ಅವರು ಸಮತೆ, ಕಾರುಣ್ಯಕ್ಕೆ ನೀಡುವ ಒತ್ತು ಭೂಮಿ ತೂಕದಂತಿದೆ. ಶಿಕ್ಷಣವಾಗಲಿ ಮತ್ಯಾವುದೇ ಜ್ಞಾನವಾಗಲಿ ಅದು ವ್ಯಕ್ತಿಯನ್ನು ಅನೇಕ ಸಂಕೊಲೆಗಳಿಂದ ಬಿಡುಗಡೆ ಮಾಡುವುದು ಅನನ್ಯವಾಗಿರುತ್ತದೆ. ಶಿಕ್ಷಣ ಕಲಿತವನು ಜಾತಿ, ಮತ, ಮೌಢ್ಯಗಳನ್ನು ಉಲ್ಲಂಘಿಸಿದ್ದೇ ಆದರೆ ಶತ ಶತಮಾನದಿಂದ ಇಂಥ ಪಿಡುಗುಗಳ ವಿರುದ್ಧ ಖಚರ್ು ಮಾಡುವ ಆಥರ್ಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಶಕ್ತಿ ಬೇರೊಂದು ಮರುಹುಟ್ಟು ಪಡೆಯಲು ಸಾಧ್ಯವಾಗುತ್ತದೆ. ಇಲ್ಲವಾದರೆ ವ್ಯವಸ್ಥೆ ಜಡತೆಯ ಜೊತೆ ಹೋರಾಟ ನಡೆಸುತ್ತಲೇ ಇರಬೇಕಾಗುತ್ತದೆ. ಈ ಅಂಶವನ್ನು ತಿಳಿದಿರುವ ಜೀವಪರವಾದಿ ಕೆ.ಎಚ್.ರಂಗನಾಥ್ರು ಸಮಾಜದ ಎಲ್ಲ ಸ್ತರಗಳಿಗೂ ಹೊಸಜ್ಞಾನ ಹರಿದರೆ ಅದರಿಂದ ನಮ್ಮೆಲ್ಲಾ ಜನರ ಬದುಕು ವಿಕಸನಗೊಳ್ಳುತ್ತದೆ ಎಂಬುದನ್ನು ಮನಗೊಂಡು ಬಾಳುತ್ತಿದ್ದಾರೆ. ಕೆ.ಎಚ್.ರಂಗನಾಥ್ರು ತಮಗೆ ಸಿಕ್ಕ ಅಧಿಕಾರವನ್ನು ಮಂಗನಿಗೆ ದೊರೆತ ಮಾಣಿಕ್ಯವೆಂದು ಭಾವಿಸಲಿಲ್ಲ, ಶಿಲ್ಪಿಯೊಬ್ಬನಿಗೆ ದೊರೆತ ಉಳಿಯೆಂದು ಭಾವಿಸಿ ಅದರ ಮೂಲಕ ಅಮೂಲ್ಯವಾದ ನಾಡ ಕೆತ್ತನೆಗೆ ಮುಂದಾದರು. ಈ ನಾಡನ್ನು ಅಧಿಕಾರವೆಂಬ ಬಾಣದಿಂದ ಉನ್ನತವಾಗಿಸುವ ಶ್ರಮದಲ್ಲಿ ನಿರತರಾದರು. ಇವರನ್ನು ಬುದ್ಧಪ್ರಜ್ಞೆಯ ಜೀವಪರವಾದಿ ಎಂದು ಕರೆಯಲಾಗುತ್ತಿದ್ದೆ.
     ಅಧಿಕಾರ ಎನ್ನುವುದು ಒಂದು ಬಸವನ ಹುಳುವಿನಷ್ಟು ಮೃದುವಾದದ್ದು ಉಕ್ಕಿನಂತೆ ಕಠಿಣವಾದದ್ದು ಎಂಬ ತಿಳಿವಳಿಕೆಯಿಂದ ಕೆ.ಎಚ್.ರಂಗನಾಥ್ ಅದನ್ನು ಉಪಯೋಗಿಸಿಕೊಳ್ಳಬೇಕಾದ ರೀತಿಯನ್ನು ಅನೇಕರಿಗೆ ಕಲಿಸಿದರು. ಶಿಸ್ತು, ನಿಭರ್ಾವುಕರಾಗಿ ಸತ್ಯವನ್ನು ಎತ್ತಿ ಹಿಡಿಯುವ ಛಲ, ಕೆಳಸ್ತರದ ಜನರ ಬಗೆಗಿನ ತೀವ್ರವಾದ ಒಲವು, ಕಾಳಜಿ ಹಾಗೆಯೇ ಕಠಿಣ ನಿಧರ್ಾರಗಳ ಎದೆಗಾರಿಕೆ ಕೆ.ಎಚ್.ರಂಗನಾಥ್ರ ವಿಶಿಷ್ಟ ಗುಣಗಳಾಗಿವೆ.
    ಕೆ.ಎಚ್.ರಂಗನಾಥ್ ಒಬ್ಬ ನಿಜವಾದ ರಾಜಕಾರಣಿಗಿರಬೇಕಾದ ಸೂಕ್ಷತೆಗೆ, ಕ್ರಿಯಾಶೀಲತೆಗೆ ಸಾಕ್ಷಿಯಾಗಿದ್ದಾರೆ. ಒಬ್ಬ ಅಧ್ಯಾಪಕನಿಗೆ, ಒಬ್ಬ ಸಾಹಿತಿಗೆ ಒಬ್ಬ ಕಲಾವಿದನಿಗೆ ಇರಬೇಕಾದ ಪ್ರಬುದ್ಧತೆ ಮತ್ತು ಸಾಮಾಜಿಕ ಕಾಳಜಿಯನ್ನು ಕೆ.ಎಚ್.ರಂಗನಾಥ್ ರಲ್ಲಿ ಕಾಣಲು ಸಾಧ್ಯ.

    ಸಾರ್ವಜನಿಕ ವ್ಯಕ್ತಿಯಾಗಿ ಗುರುತಿಸಿಕೊಂಡವರು ಕಾಲಾತೀತನಾಗಿ ಸಮಾಜದ ಹೃದಯದಲ್ಲಿ ಉಳಿವುದು ತೀರಾ ಕಷ್ಟ, ಹೀಗೆ ಉಳಿಯಬೇಕಾದರೆ ಆತನಲ್ಲಿ ಇಡೀ ಜೀವಕೋಟಿಯನ್ನು ಕುರಿತ ಅಂತಃಕರಣದ ವಿಶಾಲತೆ ಬೇಕಾಗುತ್ತದೆ. ಬುದ್ದ, ಯೇಸು, ಬಸವಣ್ಣ, ಗಾಂಧಿ, ಅಂಬೇಡ್ಕರ್, ಲೋಹಿಯಾ, ನಾಲ್ವಡಿ ಕೃಷ್ಣರಾಜ ಒಡೆಯರ್, ಕರ್ಮಯೋಗಿ ಕರಿಯಪ್ಪ, ಜನೋಪಕಾರಿ ದೊಡ್ಡಣ್ಣಶೆಟ್ಟಿ, ಮಾನವತಾವಾದಿ ಮಲ್ಲಯ್ಯ, ಮೊದಲಾದವರಿಗಿದ್ದುದು ಇಂಥ ಅಂತಃಕರಣ ಇವರೆಲ್ಲರೂ ಒಂದು ವಿಧದಲ್ಲಿ ಮಹಾನ್ ರಾಜಕಾರಣಿಗಳೇ ಆಗಿದ್ದಾರೆ. ರಾಜಕೀಯ ಎಂಬುದು ಶಿಕ್ಷಣಕ್ಕಿಂತಲೂ ಕಲೆ, ಸಾಹಿತ್ಯ, ಸಂಗೀತಗಳಿಗಿಂತಲೂ ಅಮೂಲ್ಯವಾದದ್ದು; ಶಕ್ತಿಯುತವಾದದ್ದು, ಅದರಿಂದ ಮನುಷ್ಯನನ್ನು ಉನ್ನತ ಸ್ಥಿತಿಗೇರಿಸಲು ಸಾಧ್ಯವೆಂಬ ಅರಿವು ಮೇಲಿನ ಮಹಾತ್ಮರಿಗಿತ್ತು. ಈ ರೀತಿಯ ಸಾಮುದಾಯಿಕ ಗ್ರಹಿಕೆಯ ರಾಜಕಾರಣ ಎಲ್ಲರಿಂದಲೂ ಸಾಧ್ಯವಾಗದು. ಆದರೆ ಕನರ್ಾಟಕದಲ್ಲಿ ಶಾಂತವೇರಿಗೋಪಾಲಗೌಡ, ದೇವರಾಜ ಅರಸು ಒಡನಾಟದಲ್ಲಿ ಕಾಣಿಸಿಕೊಂಡ ಸಹೃದಯಿ ರಾಜಕಾರಣಿಗಳಲ್ಲಿ ಬುದ್ಧ ಪ್ರಜ್ಞೆಯ ಕೆ.ಎಚ್.ರಂಗನಾಥ್ ಮಲೆನಾಡ ಗಾಂಧಿ ಹೆಚ್.ಜಿ.ಗೋವಿಂದಗೌಡ ಎಂದರೆ ಅತಿಶಯೋಕ್ತಿಯಾಗಲಾರದು.

                            ನಾಗತಿಹಳ್ಳಿ ರಮೇಶ್
                                                                                    nagathihalliramesh@gmail.com

ನಮ್ಮ ಕಾಲದ ಭೀಷ್ಮರು

                           ಈ ಕಾಲದಲ್ಲಿ ಬದುಕುತ್ತಿರುವ ಶ್ರೀ ಕೆ.ಎಚ್.ರಂಗನಾಥರು ಮುಳ್ಳಿನ ಹಾಸಿಗೆಯ ಮೇಲೆ ಮಲಗಿರುವ ಭೀಷ್ಮರು. ವೈಯುಕ್ತಿಕವಾಗಿ, ನನ್ನ ಸಮಾಜವಾದಿ ಯೌವ್ವನದ ಹುರುಪಿನ ದಿನಗಳಿಂದಲೂ ನನಗೆ ಅವರು ಪರಿಚಿತರು. ನನಗೆ ಪ್ರಿಯರಾಗಿದ್ದ ಶಾಂತವೇರಿಗೋಪಾಲಗೌಡರಂಥವರಿಗೆ ಇವರೂ ಪ್ರಿಯರು. ರಂಗನಾಥರನ್ನು ಭೇಟಿಯಾದಾಗಲೆಲ್ಲ ನಾನು ಎಷ್ಟು ಸದ್ಯದ ರಾಜಕಾರಣದ ಬಗ್ಗೆ ಮಾತನಾಡಿದರೂ ಅಷ್ಟೇ ನಾವು ನಂಬಿದ ತತ್ವಗಳನ್ನು ಇವರ ಜೊತೆ ಶೋಧಿಸಿಕೊಳ್ಳುತ್ತಿದ್ದೆ. ನನ್ನ ಸಂಸ್ಕಾರ ಕಾದಂಬರಿ ಪ್ರಕಟವಾದ ಒಂದೆರಡು ವರ್ಷಗಳಲ್ಲಿ ಅವರ ಜೊತೆ ನಡೆಸಿದ ಚಚರ್ೆ ಚೆನ್ನಾಗಿ ನೆನಪಿದೆ. ಕಾದಂಬರಿಯಲ್ಲಿನ ಒಂದು ಮಾತು ರಂಗನಾಥರನ್ನು ಬಹಳ ಆಳವಾಗಿ ಕಲಕಿದಂತೆ ತೋರಿತ್ತು. ನನ್ನಂತೆ ಸಾಮಾಜಿಕ ಬದಲಾವಣೆಯ ಸಾಧ್ಯತೆಯಲ್ಲಿ ನಂಬಿಕೆ ಇಟ್ಟುಕೊಂಡಿದ್ದರಿಂದಲೇ ಕಾದಂಬರಿಯ ಆ ಮಾತು ಇವರನ್ನು ಕೆಣಕಿತ್ತು. ನನ್ನ ಕಾದಂಬರಿಯಲ್ಲಿ ಒಂದು ಮಾತು ಬರುತ್ತದೆ. `ನಾರಣಪ್ಪ ಬ್ರಾಹ್ಮಣ್ಯ ಬಿಟ್ಟರೂ ಬ್ರಾಹ್ಮಣ್ಯ ನಾರಾಣಪ್ಪನ್ನನ್ನು ಬಿಡಲಿಲ್ಲ’ ಎಂಬುದು ಆ ಮಾತು. ರಂಗನಾಥರು ಇದೊಂದು ತನ್ನೊಳಗಿನ ತಾಕಲಾಟವೆಂಬಂತೆ ನನ್ನನ್ನು ಕೇಳಿದ್ದರು: `ನಾವೆಲ್ಲರೂ ಪ್ರಯತ್ನಿಸುತ್ತಿರುವ ಮನುಷ್ಯನ ಸ್ವಭಾವದ ಬದಲಾವಣೆಯ ಹೋರಾಟ ಕೊನೆಗೂ ನಿಷ್ಫಲವೇ ಅನಂತಮೂತರ್ಿ’ ಎಂದು. ಇದು ಅವರು ತಮಗೇ ಕೇಳಿಕೊಂಡಂತೆ ಕಂಡಿತ್ತು. ಆ ಕಾಲದಲ್ಲಿ ನನ್ನ ಓದುಗರಲ್ಲಿ ಹೀಗೆ ಒಂದು ಕೃತಿಯನ್ನು ಗಂಭೀರವಾಗಿ ತೆಗೆದುಕೊಂಡು ಪ್ರಶ್ನೆಯನ್ನು ಎತ್ತಬಲ್ಲವರು ಬಹಳ ಜನ-ರಾಜಕೀಯದಲ್ಲ್ಲಂತೂ-ಇರಲೇ ಇಲ್ಲ. ನಾನೂ, ರಂಗನಾಥರೂರೂ, ಗೋಪಾಲಗೌಡರೂ ಈ ಪ್ರಶ್ನೆಯನ್ನು ಎತ್ತಿಕೊಂಡು ದಿಗ್ಭ್ರಮೆಯಲ್ಲಿ ಮಾತನಾಡಿಕೊಂಡಿದ್ದೆವು.

                   ಈಚೆಗೆ ರಂಗನಾಥ್ ನನ್ನ ಜೊತೆ ಆತ್ಮೀಯವಾಗಿ ಮಾತಿಗೆ ಸಿಕ್ಕಿದ್ದು ನಾವೆಲ್ಲ ಒಟ್ಟಾಗಿ ಕಾಗೋಡು ಸತ್ಯಾಗ್ರಹದ ಪ್ರಾಯಶಃ ಸುವರ್ಣ ಮಹೋತ್ಸವಕ್ಕೆಂದು ಅಂದಿನ ಮುಖ್ಯಮಂತ್ರಿಯಾಗಿದ್ದ ಎಸ್.ಎಂ.ಕೃಷ್ಣರ ಜೊತೆ ಕಾಗೋಡಿಗೆ ಹೋಗಿದ್ದಾಗ. ಸಮಾಜವಾದಿ ಆಂದೋಲನದ ಹಿಂದಿದ್ದ ಎಲ್ಲ ನೆನಪುಗಳು ಅವತ್ತು ಬಂದವು. ಗೆಳೆಯ ಕಾಗೋಡು ತಿಮ್ಮಪ್ಪನವರಂತೂ ಅದ್ಭುತವಾಗಿ ಅದೇ ಹಿಂದಿನ ಹುರುಪಿನಲ್ಲಿ ಮಾತನಾಡಿದ್ದನ್ನು ಕೇಳಿ ನಾವೆಲ್ಲರೂ ಶ್ರೀ ಎಸ್.ಎಂ.ಕೃಷ್ಣರಾದಿಯಾಗಿ ಅಚ್ಚರಿಗೊಂಡಿದ್ದೆವು. ನಾನು ಮಾತನಾಡುವಾಗ ನನಗೇ ಮೈಮರೆತು ಏಕವಚನದಲ್ಲಿ ಕಾಗೋಡು ತಿಮ್ಮಪ್ಪನವರನ್ನು ಸಂಬೋಧಿಸಿ `ನೀನು ನಿಜವಾಗಿ ಬದಲಾಗಲೇ ಇಲ್ಲ ಹಾಗೆಯೇ ಉಳಿದಿದ್ದೀಯೆ’ ಎಂದಿದ್ದೆ. ಆಗ  ರಂಗನಾಥರು ಶ್ರೀ ಎಸ್. ಎಂ. ಕೃಷ್ಣರ ಜೊತೆಗೆ ಯಾಕೆ ಸಮಾಜವಾದಿ ಪಕ್ಷವನ್ನು ಬಿಟ್ಟು ಕಾಂಗ್ರೆಸ್ ಸೇರಬೇಕಾಯ್ತು ಎಂಬುದನ್ನು ಕೊಂಚ ತಮಾಷೆಯಾಗಿಯೇ ವಿವರಿಸಿದ್ದರು. `ನಮ್ಮ ಅವತ್ತಿನ ಪಾಟರ್ಿಯಲ್ಲಿ ಇದ್ದವರು ಹತ್ತರಿಂದ ಹದಿನೈದು ಜನರಾದರೂ ಹತ್ತು ಹದಿನೈದು ಪಕ್ಷದವರಂತೆ  ಪರಸ್ಪರ ಜಗಳವಾಡುವುದನ್ನು ತಾಳಿಕೊಳ್ಳಲಾರದೆ ಕಾಂಗ್ರೆಸ್ ಸೇರಬೇಕಾಯ್ತು’ ಎಂದಿದ್ದರು. ಈ ಮಾತಿಗೆಎ ಸ್. ಎಂ.ಕೃಷ್ಣರ ಸಮ್ಮತಿಯೂ ಇತ್ತೆಂದು ಹೇಳಿದರೆ ಕೃಷ್ಣಾ ಅವರು ಅದನ್ನು ಅಲ್ಲಗಳೆಯಲಾರರೆಂದು ತಿಳಿದಿದ್ದೇನೆ.

 

                              ನನಗಂತು ಕಾಗೋಡು ತಿಮ್ಮಪ್ಪನವರ ಬಗೆಗೆ ಅನ್ನಿಸಿದಂತೆ ರಂಗನಾಥರ ಬಗೆಗೂ ಅನ್ನಿಸಿತ್ತು, `ಇವರು ಇನ್ನೂ ನಮ್ಮವರೇ ಆಗಿದ್ದಾರೆ’ ಎಂದು. ರಂಗನಾಥರು ಯಾರನ್ನೂ ಮೆಚ್ಚಿಸಲು ದಾಕ್ಷಿಣ್ಯದ ಸುಳ್ಳುಗಳನ್ನು ಹೇಳುತ್ತಿರಲಿಲ್ಲ. ತನ್ನನ್ನು ಸುಲಭವಾಗಿ ಒಪ್ಪಿಕೊಳ್ಳದಂತೆ ನಿಷ್ಠುರವಾಗಿ ಬದುಕುತ್ತಿದ್ದ ಇವರು, ನಮ್ಮ ಕಾಲದ ಅತ್ಯಂತ ದೊಡ್ಡ ದಲಿತ ನಾಯಕರಲ್ಲಿ ಒಬ್ಬರಾದರೂ ಹಾಗೆಂದು ತಕ್ಷಣದ ಪ್ರಯೋಜನಕ್ಕಾಗಿ ಪರದಾಡುವ ದಲಿತರು ಇವರನ್ನು ಅಷ್ಟು ಮೆಚ್ಚುತ್ತಿರಲಿಲ್ಲ. ಈತ ಎಲ್ಲ ಜಾತಿಗಳನ್ನು ಮೀರಿದವರಂತೆ ಕಾಣುತ್ತಾರೆ ಎಂಬುದೇ ಒಂದು ಗುಣದ ಬದಲಾಗಿ ನ್ಯೂನ್ಯತೆಯಂತೆ ಕಾಣುವ ಕೆಟ್ಟ ಕಾಲ ನಮ್ಮದು. ಜನ ಸಾಮಾನ್ಯರ ನಡುವಿನ ರಾಜಕೀಯದಲ್ಲಿ ಮುಳುಗಿದ್ದೂ ಸತ್ಯ ನೀಷ್ಠುರತೆಯನ್ನು ಕಾಪಾಡಿಕೊಂಡು ಬಂದ ರಾಜಕಾರಣಿಗಳು ನಮ್ಮ ನಡುವೆ ಅತಿ ವಿರಳ. ಅಂತಹುದರಲ್ಲಿ ರಂಗನಾಥ ಅವರು ಅಖಿಲ ಭಾರತ ಮಟ್ಟದಲ್ಲಿ ಅಪರೂಪದವರಲ್ಲಿ ಅಪರೂಪದವರು. ಜನರಲ್ ಕಾನ್ಸ್ಟಿಟ್ಯೂಯನ್ಸಿಯಲ್ಲಿ ನಿಂತು ಆರಿಸಿಬರುತ್ತಿದ್ದರು. ಇಂಥ ಜೀವನದಲ್ಲಿ ಸಾಧನೆ ಮಾಡಿದವರಿಗೆ ಸಂಸ್ಕಾರದಲ್ಲಿ ಬರುವ ಮಾತು ಬಾಧಿಸಿದ್ದರೆ ಆಶ್ಚರ್ಯವಿಲ್ಲ. ನಾನು ಜಾತಿ ಬಿಟ್ಟ್ಟರೂ ಜಾತಿ ನನ್ನನ್ನು ಬಿಡುವುದಿಲ್ಲ ಎನ್ನುವ ಸತ್ಯದ ಅರಿವು ಇದ್ದೂ ‘ಜಾತಿ ಬಿಟ್ಟವರಂತೆ ಹೋರಾಡಿ’ ಸಮಷ್ಠಿಯ ಹಿತಚಿಂತನೆ ಮಾಡಿದ ನಮ್ಮ ನಡುವಿನ ಮನುಷ್ಯರೆಂದರೆ ಎಚ್.ಕೆ.ರಂಗನಾಥರು. ಇಂಥವರನ್ನು ಇಂದಿನ ಪುಂಡಾಟಿಕೆಯ ರಾಜಕಾರಣ ತನ್ನ ಕ್ಷೇಮ ಸಾಧನೆಗಾಗಿಯೇ ಮರೆಯುವುದು ಸಹಜ. ಆದರೆ ಕನರ್ಾಟಕದ ರಾಜಕಾರಣದಲ್ಲಿ ಕೆಲವು ವಿಷಯಗಳಿಗಾದರೂ ಹೆಮ್ಮೆಪಡುವ ನಮ್ಮಂಥವರಿಗೆ ಯಾವತ್ತೂ ರಂಗನಾಥರು ಭೀಷ್ಮರಂತೆ ಕಠಿಣವಾದ ಮಾರ್ಗಗಳನ್ನು ಹುಡುಕಿದವರಾಗಿ ಕಾಣುತ್ತಾರೆ.

 

                                    ಮೇಲಿನ ನನ್ನ ಮಾತುಗಳು ಗಾಢವಾಗಲೆಂದು ಇಲ್ಲೊಂದು ಟಿಪ್ಪಣಿ ಸೇರಿಸುತ್ತೇನೆ-ನನಗೆ ಇಷ್ಟವಾದ ಇನ್ನೊಬ್ಬ ರಾಜಕಾರಣಿಯೆಂದರೆ ಬಸವಲಿಂಗಪ್ಪನವರು. ರಂಗನಾಥರಿಗಿಂತ ಹಲವು ವಿಷಯಗಳಲ್ಲಿ ಬಸವಲಿಂಗಪ್ಪ ಭಿನ್ನರು. ಇವರೂ ಜಾತಿವಾದಿಯಲ್ಲ; ಆದರೆ ದಲಿತ ಪ್ರಜ್ಞೆಯ ಸ್ಫೋಟಕೆ ್ಕಕಾರಣರಾಗಿದ್ದರು. ಅವರನ್ನು ಒಮ್ಮೆ ಕೇಳಿದ್ದೆ: `ನೀವು ತುಂಬಾ ಗೌರವಿಸುವ ರಾಜಕಾರಣಿಯಾರು?’ ಎಂದು. ಅದಕ್ಕೆ ಅವರು ನನಗೆ ಅಚ್ಚರಿಯಾಗುವಂತೆ ಹೇಳಿದ್ದರು: `ಕೆ.ಎಚ್. ರಂಗನಾಥ್’.
ಇಬ್ಬರೂ ಭಿನ್ನವಾಗಿ, ಆದರೆ ಒಟ್ಟಾಗಿ ನಮಗೆ ಕನರ್ಾಟಕದ ರಾಜಕಾರಣದ ಬಗ್ಗೆ ಹೆಮ್ಮೆ ತರುವಂಥವರು.

                                                                                                  -ಯು.ಆರ್.ಅನಂತಮುರ್ತಿ

“ಬೇರುಗಳಿಂದ” ಪ್ರಾರಂಭಗೊಂಡು…

      ಮನಮಿಡಿಯುವ ಶ್ರೇಷ್ಠ ಭಾವಗಳ ಉಗ್ರಾಣವೇ ಆಗಿರುವ ನಾಗತಿಹಳ್ಳಿ ರಮೇಶ್ರವರ ‘ಸಮುದ್ರ ಮತ್ತು ಮಳೆ’ ಕವನಗಳಲ್ಲಿ ಮಾನವೀಯ ಮೌಲ್ಯ, ಸಂಬಂಧ ಸಂಕೀರ್ಣತೆ, ಉತ್ಕಟ ಭಾವ, ನೋವು, ತುಳಿತಕ್ಕೊಳಗಾದ ಎದೆಯಾಳದ ತಾಪ ಕವಿಯ ಅನುಭವಗಳ ಅರಿವಿನ ಸಾಲುಗಳು.
          ಬದುಕು ಮತ್ತು ಸಾಹಿತ್ಯದ ದೃಷ್ಠಿಯಿಂದಲೂ ಕವನದ ಸಾಲುಗಳು ಶ್ರೇಷ್ಠವಾಗಿಯೂ, ಒಳಗೆ ಅಡಗಿರುವ ಭಾವಗಳ ಬಡಿದೆಬ್ಬಿಸುವ ಶಕ್ತಿಯನ್ನು ಹೊಂದಿದೆ. ಅತ್ಯಂತ ಸರಳ, ದೈನಂದಿನ , ಸಣ್ಣ ಪುಟ್ಟ ಬೇಡಿಕೆಗಳೆನಿಸುವುದೇ… ಮುಂದೆ ಹೆಬ್ಬಯಕೆಯಾಗಿ, ಹೃದಯಕ್ಕೆ ಹತ್ತಿರವಾಗಿ ಕೈಗೆಟುಕದಷ್ಟು ದೂರವಾಗಿ, ನೋವುಗಳ ಹೊಡೆತಕ್ಕೆ ಜರ್ಜರಿತವಾದರೂ ಈ ಕವಿ ಛಲಬಿಡದ ತ್ರಿವಿಕ್ರಮನಂತೆ ಜೀವನ ತಂದೊಡ್ಡುವ ಎಲ್ಲಾ ಸವಾಲುಗಳಿಗೆ ಸಡ್ಡು ಹೊಡೆದು ಎದೆಕೊಟ್ಟು ನಿಲ್ಲುತ್ತಾರೆ. ಇವರು ಕಟ್ಟಿಕೊಡುವ “ಅವ್ವ” ಒಬ್ಬ ಸರಳ ಸುಜ್ಞಾನಿ ಅನುಭಾವಿ ಹೆಂಗಸು, ಮಗನ ಕನಿಷ್ಠ ಬೇಡಿಕೆಗಳನ್ನಷ್ಟೆ ಪೂರೈಸಿ ಮೌನದಲ್ಲೆ ಅವನ ಬೆಳವಣಿಗೆಯನ್ನು ಕಾಣುತ್ತಾಳೆ.
          ನಿರ್ಲಕ್ಷಿಸಿರುವ ಜವಾಬ್ದಾರಿಗಳ ಹೊರೆಯನ್ನು ನಗುಮುಖದಿಂದಲೇ ಹೊತ್ತು ಹೊರುವ ಅವ್ವನ ಮಾತುಗಳು “ತತ್ವ ಪದಗಳಂತೆ” ನಾಟುತ್ತವೆ. ಅವ್ವನ ತತ್ವಪದಗಳಲ್ಲಿ ಬೆಳಕನ್ನು ಕಂಡು ಸಮಾಧಾನವನ್ನು ಉಂಡು, ತನ್ನ ಇಡೀ ಶಕ್ತಿಯನ್ನು ಒಟ್ಟುಗೂಡಿಸಿ ಓದುಗರನ್ನು ಸಮುದ್ರದ ಆಳ ಹಾಗೂ ಮಳೆಯ ಮೊರೆತದ ಅನುಭವವನ್ನು ನಮ್ಮೊಳಗಿಳಿಸುವ ಕವಿಯ ಭಾವಯಾನವನ್ನು ಮೆಚ್ಚಲೇಬೇಕು. ಕವನದ ಸಾಲುಗಳು ವಾಸ್ತವಕ್ಕೆ ಹತ್ತಿರವಾಗಿ, ಸಮುದ್ರದ ಆಳವನ್ನು, ಮಳೆಯ ಸಹಜತೆಯನ್ನು ಹೊಂದಿದೆ.
           “ಸಮುದ್ರ ಮತ್ತು ಮಳೆ” ಓದುವ ಪ್ರತಿ ಓದುಗನೂ ತನ್ನದೇ ಆದ ಆಳವನ್ನು ತಾನು ಮುಟ್ಟಿದ ಅನುಭವವಾಗುತ್ತದೆ. ಇವರ ಕವನ ಓದಿದ ನಂತರವೇ ಇವರ ಮನದಾಳದ ನಿಸ್ವಾರ್ಥ ವಿಶ್ವ ಪ್ರೇಮ, ವಿನಯಶೀಲತೆ, ಕಾಳಜಿ, ಭಾವಣಿಕೆಗಳು ಅರ್ಥವಾಗುತ್ತದೆ. ಕವನದ ಸಾಲುಗಳು “ಬೇರುಗಳಿಂದ” ಪ್ರಾರಂಭಗೊಂಡು, ವಲಸೆ ಹೋಗುವವರ ಅದ್ಭುತ ಹುಡುಕಾಟವನ್ನು, ಒಳಗೊಳಗೇ ಸೀಳುವ ಖಾಲಿತನವನ್ನು, ನಾಗರಿಕತೆಯ ಪಿಡುಗುಗಳನ್ನು, ಪಾಶ್ಚಿಮಾತ್ಯದ ಟೊಳ್ಳುತನವನ್ನು, ಗುರಿ ಇಲ್ಲದ ಹುಡುಕಾಟಗಳ ಕೊನೆಗಾಣದ ಮರೀಚಿಕೆಯಾಗಿ, ಕನಸು ಮತ್ತು ವಾಸ್ತವಗಳ ಪರಿಭಾವವನ್ನು ಉತ್ಕಟತೆಯಿಂದ ಕಟ್ಟಿಕೊಡುತ್ತದೆ. ಇತಿಹಾಸದಿಂದಲೂ ಭೂಮಿಯನ್ನಾಳಿದವರು ತಮ್ಮ ಸ್ವಾರ್ಥ ಸಾಧನೆಗಾಗಿ, ದುರಾಸೆಯ ಫಲದಿಂದ, ಪ್ರಕೃತಿಯನ್ನು ನಿರ್ಲಕ್ಷಿಸಿ, ಈ ಭೂಮಿಯನ್ನು ಉರಿಯುವ ಕುಲುಮೆಯನ್ನಾಗಿಸಲು ಕಾದಾಡಿದರು. ಎರಡು ಮಹಾ ಯುದ್ಧಗಳು, ಸಿಡಿಗುಂಡು ಅಣುಬಾಂಬ್ಗಳು, ಯುದ್ಧದ ನಂತರದ ಮಾನವನ ಸಣ್ಣತನದ ಲೆಕ್ಕಾಚಾರಗಳು, ಉರಿಯುವ ಸಮಸ್ಯೆಗಳ ಬಗೆಗಿನ ಮಾನವನ ನಿರ್ಲಜ್ಜ- ನಿರ್ಲಕ್ಷತೆಗಳು, ಭೂಮಿಯನ್ನು ವಿನಾಶದ ಅಂಚಿಗೆ ಕೊಂಡೊಯ್ಯುವ ಮಾನವನ ಸ್ವಾರ್ಥವನ್ನು ಕವನದ ಸಾಲುಗಳು ಕೂಗಿ ಹೇಳುತ್ತವೆ. ಇದನ್ನು ಓದಿದವರಿಗೆ ಮಾನವನ ಈ ನೀಚಗುಣಗಳ ಬಗ್ಗೆ ಸಂಕಟ, ಕೋಪ ಉಂಟಾಗುತ್ತದೆ.
           ಓದುಗರ ಮೇಲೆ ತೀಕ್ಷ್ಣವಾದ ಅಚ್ಚಳಿಯದ ಪರಿಣಾಮವನ್ನು ಉಂಟು ಮಾಡುವ ‘ಸಮುದ್ರ ಮತ್ತು ಮಳೆ’ ಒಂದು ಅದ್ಭುತ ಸೃಷ್ಠಿಯೇ ಸರಿ, ಈ ಕವನ ಸಂಕಲನವನ್ನು ಅಂಕುರ್ ಬೆಟಗೇರಿಯವರು ಆಂಗ್ಲ ಭಾಷೆಗೂ ಅನುವಾದಿಸಿದ್ದಾರೆ. ಆದರೆ ಮೂಲ ಕೃತಿಯ ಸೊಗಡನ್ನು ಸಾಂಸ್ಕೃತಿಕ ಸೊಬಗನ್ನು ಮೂಲಭಾಷೆಯಾದ ಕನ್ನಡದಲ್ಲೇ ಓದಿಯೇ ತೀರಬೇಕು. ಇಂತಹ ಒಂದು ಒಳ್ಳೆಯ ಓದನ್ನು ಒದಗಿಸಿಕೊಟ್ಟ ರಮೇಶ್ರವರಿಗೆ ನನ್ನ ಹೃದಯಪೂರ್ವಕ ಅಭಿನಂದನೆಗಳು.
                                                         

                                                                                                ಅನುರಾಧ ದಿವಾಕರ್,
                                                                                                 ಆಂಗ್ಲ ಪ್ರಾಧ್ಯಾಪಕರು,

Hello world!

Welcome to WordPress.com. This is your first post. Edit or delete it and start blogging!

Follow

Get every new post delivered to your Inbox.